ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

ಯಕ್ಷಗಾನ ಪರಿಚಯ

Home

ಯಕ್ಷಗಾನ ಕರ್ನಾಟಕದ ಒಂದು ಸಾಂಪ್ರದಾಯಿಕ ಅನನ್ಯ ಕಲೆ. ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಭಾಷಣೆ ಇತ್ಯಾದಿ ಎಲ್ಲ ಕಲೆಗಳನ್ನು ಒಳಗೊಂಡಿರುವ ‘ಸಮಗ್ರ ರಂಗಭೂಮಿ’ ಎಂದು ಪರಿಗಣಿಸಲ್ಪಟ್ಟಿದೆ. ಮೂಲತಃ ಮಂಗಳೂರು, ಕರಾವಳಿ, ಉಡುಪಿ ನೆಲೆಯಲ್ಲಿ ಸೀಮಿತವಾಗಿ ಪ್ರದರ್ಶನಗೊಳ್ಳುತ್ತಿದ್ದ ಈ ಪ್ರಾದೇಶಿಕ ಕಲೆ ಕಾಲಕ್ರಮೇಣ ರಾಜ್ಯದ ಹಲವಾರು ಜಿಲ್ಲೆಗಳಲ್ಲೂ ವ್ಯಾಪಿಸಿ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡು ಇಂದು ಜಾಗತಿಕಮಟ್ಟದವರೆಗೂ ಬೆಳವಣಿಗೆ ಕಂಡಿದೆ. ಯಕ್ಷಗಾನ ಸಾಹಿತ್ಯವು ಪದ್ಯರೂಪದಲ್ಲಿದ್ದು ಬಹುತೇಕ ಪ್ರಸಂಗಗಳು ರಾಮಾಯಣ, ಮಹಾಭಾರತದ ಪುರಾಣ ಕಥೆಗಳನ್ನು ಆಧರಿಸಿವೆ. ಯಕ್ಷಗಾನದ ಪಾತ್ರಗಳಿಗೆ ತನ್ನದೇ ಆದ ನಿರ್ಧಿಷ್ಟ ಆಹಾರ್ಯ ಮತ್ತು ಮುಖವರ್ಣಿಕೆಗಳಿವೆ.

 

ಯಕ್ಷಗಾನವನ್ನು ಮೂಡಲಪಾಯ ಮತ್ತು ಪಡುವಲಪಾಯ ಎಂದು ಎರಡು ವಿಧವಾಗಿ ಗುರುತಿಸಲ್ಪಟ್ಟಿದೆ. ಕರಾವಳಿ ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಪ್ರಚಲಿತವಿರುವ ಯಕ್ಷಗಾನಕ್ಕೆ ಪಡುವಲಪಾಯ ಎಂದು ಹೆಸರು. ಪಡುವಲಪಾಯ ಕಲಾ ಪ್ರಕಾರದ ಪ್ರಭೇದಗಳು-ತೆಂಕುತಿಟ್ಟು ಮತ್ತು ಬಡಗುತಿಟ್ಟು. ಮೂಡಲಪಾಯ ಯಕ್ಷಗಾನವು ಜಾನಪದೀಯ ಸಾಹಿತ್ಯವನ್ನು ಒಳಗೊಂಡಿದ್ದು, ತುಮಕೂರು, ಮೈಸೂರು, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯಲ್ಲಿ ಪ್ರಚಲಿತವಿದೆ. ಮೂಡಲಪಾಯ ಇತರ ಪ್ರಭೇದಗಳು ಮೂಡಲಪಾಯ ಯಕ್ಷಗಾನ, ಕೇಳಿಕೆ, ಮುಖವೀಣೆ, ಘಟ್ಟದ ಕೋರೆ ಕಲಾಪ್ರಕಾರಗಳಿರುತ್ತವೆ.

 

ಅಕಾಡೆಮಿಯ ಪರಿಚಯ

 

ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ:273:ಕರಅ:2007, ದಿನಾಂಕ:19.08.2007ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. 2017ರಲ್ಲಿ ಪ್ರತ್ಯೇಕವಾದ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಪ್ರೊ. ಎಂ.ಎ.ಹೆಗಡೆ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಅವರು ಅಕಾಡೆಮಿಯ ಅಧ್ಯಕ್ಷ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಂಡು, ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ಆರಂಭಿಸಿದರು.

 

ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ:149:ಕಸಧ:2019, ದಿನಾಂಕ:15.10.2019ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಅದರನ್ವಯ ಎರಡನೇ ಬಾರಿಗೆ ಪ್ರೊ|| ಎಂ.ಎ.ಹೆಗಡೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಇವರ ಅಕಾಲಿಕ ನಿಧನದ ನಂತರ, ಸರ್ಕಾರದ ಅಧಿಸೂಚನೆ ಸಂಖ್ಯೆ:ಕಸಂವಾ:149:ಕಸಧ:2021(ಭಾಗ-1), ದಿನಾಂಕ:12.01.2022ರನ್ವಯ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಡಾ|| ಜಿ.ಎಲ್.ಹೆಗಡೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರು ಅಕಾಡೆಮಿಯ ಅಧ್ಯಕ್ಷ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಂಡು, ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ಆರಂಭಿಸಿದರು.

 

ಪ್ರಸ್ತುತ, ಸರ್ಕಾರದ ಅಧಿಸೂಚನೆ ಸಂಖ್ಯೆ:ಕಸಂವಾ:447:ಕಸಧ:2022 ದಿನಾಂಕ:17.10.2022ರಲ್ಲಿ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು/ಸದಸ್ಯರ ಅಧಿಕಾರಾವಧಿಯು ಅಕ್ಟೋಬರ್ 15, 2022ಕ್ಕೆ ಮುಕ್ತಾಯಗೊಂಡಿರುವುದರಿಂದ, ಈ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಹೊಸ ಅಧ್ಯಕ್ಷರು/ಸದಸ್ಯರು ನೇಮಕವಾಗುವವರೆಗೆ ಶ್ರೀ ಅಶೋಕ ಎನ್. ಚಲವಾದಿ, ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವಿಭಾಗ ಇವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.

×
ABOUT DULT ORGANISATIONAL STRUCTURE PROJECTS